ರೇಲೀ, ವಾಲ್ಟರ್
1552-1618. ಇಂಗ್ಲಿಷ್ ಯೋಧ, ನಾವಿಕ, ಲೇಖಕ ಮತ್ತು ಪರಿಶೋಧಕ. ಬುಡ್‍ಲೀ ಸಾಲ್ಟೆರ್‍ಟನ್ (ಡೇವೋನ್) ಬಳಿಯ ಹೇಯಸ್‍ಬಾರ್ಟ್‍ನ್‍ನಲ್ಲಿ 1554 ರಲ್ಲಿ ಜನಿಸಿದ. ಆಕ್ಸ್‍ಫರ್ಡಿನಲ್ಲಿ ವಿದ್ಯಾಭ್ಯಾಸ ಪಡೆದ. 1569ರಲ್ಲಿ ಫ್ರಾನ್ಸಿಗೆ ಹ್ಯುಜಿನಾಟ್‍ರ ಪರವಾಗಿ ಹೋರಾಡಲು ಸ್ವಯಂಸೇವಕನಾಗಿ ತೆರಳಿದ. ಈತನದು ಸಾಹಸಮಯ ಜೀವನ. 1577ರಲ್ಲಿ ಈತ ತನ್ನನ್ನು “ಡೆಕುರಿಯ” ಅಂದರೆ ಆಸ್ಥಾನದ ಸದಸ್ಯ ಎಂದು ಕರೆದುಕೊಂಡಿದ್ದಾನೆ. 1578ರಲ್ಲಿ ಈತ ಸರ್ ಹಂಫ್ರಿ ಗಿಲ್‍ಬರ್ಟ್ ಎಂಬ ತನ್ನ ಮಲಸಹೋದರನೊಂದಿಗೆ ಸ್ಪೇಯಿನಿನ ಹಡಗುಗಳನ್ನು ನಾಶಪಡಿಸಿದ. 1579ರಲ್ಲಿ ಉತ್ತರ ಅಮೆರಿಕಕ್ಕೆ ಪ್ರವಾಸ ಹೊರಟು, ವಿಫಲನಾಗಿ ಹಿಂದಿರುಗಬೇಕಾಯಿತು. 1580ರಲ್ಲಿ ಐರ್ಲೆಂಡಿಗೆ ತೆರಳಿದ. ಆದರೆ ಮತ್ತೆ 1584ರಲ್ಲಿ ಉತ್ತರ ಅಮೆರಿಕ ತಲುಪಿ ಒಂದು ವಸಾಹತನ್ನು ಸ್ಥಾಪಿಸಿ ಅದಕ್ಕೆ ರಾಣಿ ಎಲಿಜಬೆತಳ ಗೌರವಾರ್ಥವಾಗಿ ವರ್ಜಿನಿಯ ಎಂದು ಹೆಸರಿಸಿದ. ಸ್ಪ್ಯಾನಿಷ್ ಆರ್ಮಡದ ವಿಪತ್ತಿನ ದಿನಗಳಲ್ಲಿ ದೇಶರಕ್ಷಣೆಗೆ ಅಸಾಧಾರಣ ಸೇವೆ ಸಲ್ಲಿಸಿದನಲ್ಲದೆ ಹಲವು ನೌಕಾ ಯುದ್ಧಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿದ. ಎಲಿಜಬೆತಳ ನಿಧನಾಂತರ 1603ರಲ್ಲಿ ಜೇಮ್ಸ್‍ನ ಪೀಠಾರೋಹಣದ ಅನಂತರ ಈತನ ದುರ್ದೆಶೆ ಆರಂಭವಾಯಿತು. ರಾಜದ್ರೋಹದ ಆಪಾದನೆಗೊಳಗಾಗಿ ಸೆರೆಮನೆ ಸೇರಿದ. ಫ್ರಾನ್ಸ್‍ಗೆ ಓಡಿಹೋಗಲು ಮಾಡಿದ ಪ್ರಯತ್ನ ಸರ್ ಲೀವಿಸ್ ಸ್ಟೂಕ್ಲೀ ಎಂಬ ಇವನ ರಕ್ತಸಂಬಂಧಿಯಿಂದ ನಿಷ್ಫಲ ವಾಯಿತು. ರಾಜಾಜ್ಞೆಯಂತೆ 1618 ಅಕ್ಟೋಬರ್ 29ರಂದು ವೆಸ್ಟ್ ಮಿನಿಸ್ಟರಿನ ಹಳೆಯ ಅರಮನೆಯ ಪ್ರಾಂಗಣದಲ್ಲಿ ಈತನ ಶಿರಶ್ಛೇದನ ಮಾಡಲಾಯಿತು.

ಸೆರೆಮನೆಯ ವಾಸದ ದಿನಗಳಲ್ಲಿ ಈತ ಹಿಸ್ಟರಿ ಆಫ್ ದಿ ವಲ್ರ್ಡ್ (1614) ಎಂಬ ಕೃತಿಯನ್ನು ರಚಿಸಿದ. ಇದರಲ್ಲಿ ಕ್ರಿ.ಪೂ. 130 ವರೆಗಿನ ಪ್ರಾಚೀನ ಯಹೂದಿ, ಗ್ರೀಕ್, ರೋಮನ್ ಮತ್ತು ಈಜಿಪ್ಟಿನ ಜನಾಂಗಗಳ ಚರಿತ್ರೆ ಅಡಕವಾಗಿದೆ. ಕೃತಿ ಅಸಂಪೂರ್ಣ. ಈತನನ್ನು ನಾಸ್ತಿಕನೆಂದು ಬಹುಜನರು ಭಾವಿಸಿದ್ದರೂ ಈ ಚರಿತ್ರೆ ಈತನ ಮತಶ್ರದ್ಧೆಯನ್ನು ವ್ಯಕ್ತಪಡಿಸುತ್ತದೆ. ಜಗತ್ತಿನ ಪ್ರಾಚೀನ ಚರಿತ್ರೆಯನ್ನೆಲ್ಲ ತನ್ನ ದೇಶದ ಚರಿತ್ರೆಗೆ ಪೀಠಿಕೆಯನ್ನಾಗಿ ಬಳಸಿ, ಪಂಡಿತವರ್ಗಕ್ಕಾಗಿ ಮಾತ್ರವಲ್ಲದೆ ಜನಸಾಮಾನ್ಯರಿಗೂ ಉಪಯೋಗವಾಗುವಂತಹ  ಚರಿತ್ರೆಯನ್ನು ರಚಿಸಿದ್ದು ಈತನ ಹೆಗ್ಗಳಿಕೆ. ಸು. 600 ಹೆಚ್ಚುಮಂದಿ ಗ್ರಂಥಕರ್ತರನ್ನು ಈತ ಹೆಸರಿಸಿದ್ದಾನೆ. ಚಾರಿತ್ರಿಕ ಕೃತಿಗಳೇ ಇಲ್ಲದ ಆ ಕಾಲದಲ್ಲಿ ಈ ಕೃತಿ ಅಪಾರ ಜನಮನ್ನಣೆ ಗಳಿಸಿತ್ತು. ಇದಲ್ಲದೆ ಅಜೋಕ್ಸ್‍ನ ಕದನವನ್ನು ಕುರಿತ “ವರದಿ” (1591)ಯನ್ನೂ ಈತ ಬರೆದಿದ್ದಾನೆ.

	ರಾಣಿ ಎಲಿಜಬೆತ್ ತನ್ನ ಕಾಲಿಡಲು ಅನುಕೂಲವಾಗುವಂತೆ ಕೆಸರಿನ ಮೇಲೆ ಅಂಗಿಯನ್ನು ಹಾಸಿದ ರೇಲಿಯ ರಾಜನಿಷ್ಠೆಯ ಕತೆ ಸ್ಕಾಟ್‍ನ ಕೆನಿಲ್‍ವರ್ತ್ ಕಾದಂಬರಿಯಲ್ಲಿ  ಉಲ್ಲೇಖಗೊಂಡಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ